Monday, April 13, 2009

ಬಾಡಿ ಹೋದ ಬಳ್ಳಿಯಿಂದ ಹೂವು ಅರಳ ಬಲ್ಲದೇ?

"ಅಯ್ಯಪ್ಪ! ಈ ವರ್ಷ ಏನ್ ಬಿಸ್ಲು ಮಾರಾಯಾ, ಮನೆಯಿಂದ ಆಚೆಬರೋಕ್ಕೆ ಆಗಲ್ಲ. ಹೋದ್ ವರ್ಷ ಇಷ್ಟು ಬಿಸ್ಲು ಇರ್ಲಿಲ್ಲಾ. ಈಗ್ಲೆ ಹೀಗೆ, ಇನ್ನಾ ಮೇ, ಜೂನ್ ಹೊತ್ತಿಗೆ ಏನ್ ಗತಿನೋ". ಇದು ಈನಡುವೆ ನಾವು ಪ್ರತಿ ವರ್ಷ ತಪ್ಪದೆ ಹೇಳುತ್ತಿರುವ, ಕೇಳುತ್ತಿರುವ ಮಾತು. ಬೇಸಿಗೆ ಬಂತು ಅಂದ್ರೆ ಸಾಕು ಮನೆಯಲ್ಲಿರುವ ಎಲ್ಲಾ ಕಿಡಕಿಗಳನ್ನು ತೆಗೆಯದೆ, ಮನೆಯಲ್ಲಿರುವ ಎಲ್ಲಾ ಫ್ಯಾನ್ ಗಳನ್ನು ಉರಿಸದೆ ಇರಲಾಗುವುದಿಲ್ಲ. ರಾತ್ರಿ ಹೊತ್ತು ಮನೆ ಮಹಡಿ ಮೇಲೆ ಹೋಗಿ ಮಲಗುವುದು ಸರ್ವೇ ಸಾಮಾನ್ಯವಾಗಿದೆ. ಊಟ, ತಿಂಡಿ ಮಾಡುವುದಕ್ಕಿಂತ ಎಳನೀರು, ಮಜ್ಜಿಗೆ ಮುಂತಾದ ತಂಪು ಪಾನೀಯಗಳ ಮೊರೆ ಹೋಗುತ್ತೇವೆ. ಮಧ್ಯಾಹ್ನ ಐದು ನಿಮಿಷ ಮನೆಯಿಂದ ಆಚೆ ಬಂದರೆ ಸಾಕು ಯಾವ ಜನುಮದಲ್ಲಿ ಏನ್ ಪಾಪ ಮಾಡಿದ್ವಪ್ಪಾ ಅನ್ನಿಸೋ ಹಾಗಾಗುತ್ತದೆ. ಎಲ್ಲಾದರು ಮರದ ನೆರಳು, ಇಲ್ಲಾ ಅಂಗಡಿಯ ನೆರಳು ಸಿಕ್ಕರೆ ಆ ಮಾರ್ಗದಲ್ಲೆ ಹೋಗೋಣ, ಎಷ್ಟು ದೂರವಾದ್ರು ತೊಂದರೆ ಇಲ್ಲಾ ಅಂತ ಮನಸ್ಸು ಹೇಳ್ತಿರತ್ತೆ. ಊರೆಲ್ಲಾ ಸುತ್ತಾಡಿ, ಮನೆ ತಲುಪಲು ಸಿಟಿ ಬಸ್ ಹತ್ತಿದಾಗ ನಮ್ಮ ದುರಾದೃಷ್ಟಕ್ಕೆ ಸೀಟ್ ಸಿಗ್ಲಿಲ್ಲಾ ಅಂದ್ರೆ, ಯಾರ್ ಯಾರ್ ಮೇಲೆ ಯಾವ್ ತರದ ಸಿಟ್ಟು ಪ್ರಯೋಗ ಆಗುತ್ತೋ ನಮಗೆ ತಿಳಿದಿರೋದಿಲ್ಲಾ. ಮನೆಗೆ ಬಂದು ಒಂದು ಗ್ಲಾಸ್ ನೀರು ಕುಡಿಯೋವರೆಗು ಆ ಕೋಪ ಆರುವ ಮಾತಾಡಲ್ಲಾ.
ದಿನದಿಂದ ದಿನಕ್ಕೆ ತಾಪಮಾನ ಏರುತ್ತಿದೆ, ಮರಗಳ ಸಂಖ್ಯೆ ಕಡಿಮೆ ಆಗ್ತಾ ಇದೆ. ಮಲೆನಾಡಿಗು, ಬಯಲುಸಿಮೆಗು ವ್ಯತ್ಯಾಸವೇ ಇಲ್ಲದಂತಾಗಿದೆ. ಒಂದು ಹನಿ ಮಳೆಗಾಗಿ ಹಪಹಪಿಸುತ್ತಿದ್ದೇವೆ. ಬರಗಾಲ ವರ್ಷದ ಒಂದು ಭಾಗವಾಗಿದೆ. ಅಭಿವೃಧ್ಧಿ, ಮೆಟ್ರೋ, ಟ್ರಾಫಿಕ್ ಸಮಸ್ಯೆ, ರಸ್ತೆ ಅಗಲೀಕರಣ ಮುಂತಾದ ಕಾರಣಗಳಿಗೆ ನಗರ ಪ್ರದೇಶದಲ್ಲಿರೋ ಮರಗಳು ನೆಲಕ್ಕುರುಳಿವೆ. SEZ ಗೆ ಕಾಡು ನಾಡಾಗಿ ಮಾರ್ಪಟ್ಟಿದೆ. ಕೆರೆ, ಪಾರ್ಕುಗಳಿದ್ದ ಜಾಗದಲ್ಲಿಂದು ಐಶಾರಾಮಿ ಅಪಾರ್ಟಮೆಂಟುಗಳು ತಲೆಎತ್ತಿವೆ. ಮರಗಳಿಗೆ ಸಂಖ್ಯೆ ಕೊಟ್ಟು ಲೆಕ್ಕಹಾಕುವ / ಕಾಪಾಡುವ ಸ್ಥಿತಿಗೆ ಬಂದು ತಲುಪಿದ್ದೇವೆ. ರೇಂಜ್ ಆಫೀಸರ್, ಪಾರೆಸ್ಟ್ ಆಫೀಸರ್ ಗಳ್ಳಿದ್ದರು, ಮರಗಳ ಕಳ್ಳಸಾಗಣಿಗೆ ರಾಜಾರೋಷವಾಗಿ ಜಾರಿಯಲ್ಲಿದೆ. ನಾಶದ ಅಂಚಿನಲ್ಲಿರುವ ಹಲವಾರು ಪ್ರಾಣಿ ಪಕ್ಷಿಗಳನ್ನು ನಾವು ಇಂದು ಪ್ರಾಣಿ ಪಕ್ಷಿಧಾಮಗಳಲ್ಲಿ ನೋಡಬಹುದು. ಆದರೆ, ನಮ್ಮಲ್ಲಿದ್ದ ಹಾಗು ಅಲ್ಪ ಸ್ವಲ್ಪ ಊಳಿದಿರುವ ವನ್ಯ ಸಂಪತ್ತು ನಾಶವಾದರೆ? ಇಂತ ಒಂದು ಯೋಚನೆ ಮನಸ್ಸಿಗೆ ಬಂದರೇನೆ ಭಯವಾಗುತ್ತದೆ. ನಮ್ಮಲ್ಲಿರುವುದು ಕೇವಲ ಮರಗಳಲ್ಲ. ಆ ಮರಗಳಿಗೆ ತನ್ನದೇ ಆದ ಅದ್ಬುತ ಇತಿಹಾಸವಿದೆ. ಒಂದೊಂದು ಮರವು ತಾನು ಕಂಡ ಈ ನಾಡಿನ ಸೊಬಗನ್ನು ಹೆಮ್ಮೆಯಿಂದ ನಮಗೆ ಹೇಳುತ್ತಿದೆ. ಒಂದೊಂದು ಕಾಡು ತಾನು ಈ ಭೂಮಿಗಿಳಿಸಿದ ಮಳೆಯ ಪ್ರಮಾಣದ ದಾಖಲೆಯನ್ನು ಸಾರಿ ಹಿಗ್ಗುತ್ತಿದೆ. ಒಂದೊಂದು ಮರವು ತನ್ನ ನೆರಳಿನಲ್ಲಿ ಇಂತಿಂಧ ಋಷಿ ಮುನಿಗಳು ಸಾಧನೆ ಮಾಡಿರುವರೆಂದು ಪುನೀತಗೊಂಡಿದೆ. ನಮ್ಮ ಕಾಡಿನ ಮರಗಳಲ್ಲಿ ಅಪಾರವಾದ ವೈಧ್ಯಕೀಯ ಶಕ್ತಿಯಿದೆ. ಮಾತ್ರೆಗಳಿಂದ ಗುಣವಾಗದ ಅದೆಷ್ಟೋ ಖಾಯಿಲಿಗೆ ನಾವು ಆಯುರ್ವೇಧದ ಮೊರೆ ಹೋಗುತ್ತೇವೆ. ಹಾಗು ಆಯುರ್ವೇಧದಿಂದ ಎಷ್ಟೋ ಖಾಯಿಲಿಗಳು ಗುಣವಾಗಿ ಮನುಷ್ಯ ಇಂದು ಸಂತಸದಿಂದ ಜೀವಿಸುತ್ತಿದ್ದಾನೆ. ನಮ್ಮ ನಾಡಿನಲ್ಲಿ ಬೆಳೆಯುವ ಗಿಡಗಳಲ್ಲಿ ವಿವಿಧಬಗೆಯ ಫಲ ಪುಷ್ಪಗಳು ದೋರೆಯುತ್ತವೆ. ಅವುಗಳನ್ನು ಲೆಕ್ಕವಿಡುವ ಮಾತು ಹಾಗಿರಲಿ ನಮ್ಮಲಿ ಎಷ್ಟೋ ಮಂದಿಗೆ ಅವುಗಳ ಹೆಸರುಗಳು ತಿಳಿದಿಲ್ಲಾ. ಆ ಹೂಗಳ ಅಂದ ಚೆಂದ ಬಣ್ಣಿಸಲು ಕೇವಲ ಕವಿಗಳಿಗಷ್ಟೆ ಸಾಧ್ಯ.
ಆದರೆ ಈ ಸೊಬಗನ್ನು ಇಂದು ನಾವೆಲ್ಲಿ ಕಾಣುತ್ತಿದ್ದೇವೆ? ಯಾರ ಯಾರ ಮನೆಗಳ ಮುಂದಿಂದು ಗಿಡ ಮರಗಳಿವೆ. ಗಿಡ ಮರಗಳನ್ನು ಬೆಳೆಸಿದರೆ ಎಲ್ಲಿ ಹಾವು ಬರುವುದೋ, ಎಲ್ಲಿ ನಮ್ಮ ಮನೆ ಕಳ್ಳರ ಅಡುಗುತಾಣವಾಗುವುದೋ ಎಂದು ಎಲ್ಲರು ಅಂಜುತ್ತೇವೆ. ನಾನು ಸಣ್ಣವನಾಗಿದ್ದಾಗ ಅಂದಿನ ಜನಪ್ರಿಯ ವಾಹಿನಿ ದೂರದರ್ಶನದಲ್ಲಿ ಹೀಗೊಂದು ಹಾಡು ಪ್ರಸಾರವಾಗುತಿತ್ತು. "ಗಿಡ ನೆಡಿ ಗಿಡ ನೆಡಿ ಗಿಡ ನೆಡಿ ಮನೆಯ ಮುಂದೊಂದು ಗಿಡ ನೆಡಿ, ಮನೆಯ ಹಿಂದೊಂದು ಗಿಡ ನೆಡಿ. ನೆಟ್ಟ ಗಿಡಕೆ ನೀರು ಹಾಕಿ ಬಾಳು ಕೋಡಿ". ಈ ಸಾಲು ಎಷ್ಟು ಅರ್ಥಪೂರ್ಣವಾಗಿದೆಯಲ್ಲವೆ. ಮನೆಯ ಮುಂದೊಂದು ಮರವಿದ್ದರೆ ಆ ಮನೆಯ ಸೋಬಗು ಮೂರರಷ್ಟು ಹೆಚ್ಚುತ್ತದೆ. ಇದಕ್ಕೆ ಯಾವ ನೆರೋಲೆಕ್ಸ್ ಪೇಂಟ್ ನ ಸಹಾಯವು ಬೇಡ. ಸಂಜೆಯ ಸಮಯದಲ್ಲಿ ನಿಮ್ಮ ದಿನನಿತ್ಯದ ಜೀವನದ ಜಂಜಾಟವನ್ನು ಮುಗಿಸಿ, ನಿಮ್ಮ ಮನೆಯ ಆವರಣದಲೋ ಅಥವ ನಿಮ್ಮ ಮನೆಯ ಜಗುಲಿಯ ಮೇಲೋ ಕೂತು ನಿಮ್ಮ ಮನೆಯವರ ಜೊತೆ ಮಾತಾಡುವಾಗ ಹಿತವಾಗಿ ಗಾಳಿ ಬೀಸಿದಾಗ ಸಿಗುವ ಆನಂದ ಯಾವ ಎ.ಸಿ.ಯಿಂದ ತಾನೆ ಸಿಗಲು ಸಾಧ್ಯ. ನಿಮ್ಮ ಮನೆಯ ಮುಂದೆ ನೀವು ಅಕ್ಕರೆಯಿಂದ ಬೆಳೆಸಿದ ಸಣ್ಣ ಹೂದೋಟಕ್ಕೆ ನೀರೆರುಯುವಾಗ ಆಗುವ ವ್ಯಾಯಾಮ ಯಾವ ಜಿಮ್ ನಿಂದ ದೊರೆಯಲು ಸಾಧ್ಯ. ಆ ಹೋದೋಟದಲ್ಲಿ ಅದೊಂದು ದಿನ ಚೆಂದದಹೂ ಮೂಡಿದಾಗ ನಿಮ್ಮ ಮುಖದಲ್ಲಿ ಮೂಡುವ ನಗುವಿಗೆ ಬೆಲೆಕಟ್ಟಲಾದೀತೆ. ನಿಮ್ಮ ಮನೆಯ ಕಾಂಪೌಡಿಗೋ, ಗೋಡೆಗೋ ನೀವು ಬೆಳೆಸಿದ ಗಿಡ ಭಾರವಾಗಿ, ಆ ಗಿಡವನ್ನೇ ಕಡೆಯುವಾಗ, ನಿಮ್ಮ ಮಕ್ಕಳನ್ನೇ ಕಳೆದು ಕೊಂಡಷ್ಟು ನೋವಾಗುದಿಲ್ಲವೇ. ಆ ನೋವನ್ನು ಮರೆಯಲು ಅದೆಷ್ಟು ದಿನಬೇಕೋ ಹೇಳತೀರದು.
ಆದರೆ ಈ ಸುಃಖ ದು:ಖಗಳೆಲ್ಲಾ ಈಗ ಕೇವಲ ಕಲ್ಪನಾ ಲೋಕದಲ್ಲಿವೆಯಷ್ಟೆ. ಕಾಡು ತನ್ನ ಪದದ ಅರ್ಥವನ್ನು ಕಳೆದು ಕೊಂಡಿದೆ. ಮರಗಿಡಗಳು ಕೇವಲ ಕಾಡಿಗಷ್ಟೆ ಸೀಮಿತವಾದಂತಿದೆ. ನಾಡಿನಲ್ಲಿ ಕಾಂಕ್ರೀಟೇ ಕಾಡಗಿದೆ. ನಿರ್ಧಿಷ್ಟ ಪ್ರದೇಶವನ್ನು ಗುರುತು ಹಾಕಿ ಅಲ್ಲಿ ಮಾತ್ರ ಮರಗಳನ್ನು ಬೆಳೆಸಿ ಕಾಡನ್ನು ಸೃಶ್ಠಿಸಿ, ಆ ಪ್ರದೇಶವನ್ನು ಪ್ರವಾಸಿ ತಾಣವಾಗಿಸುವ ಕಾಲ ಬಂದಾಗಿದೆ. ಇಂದು ಯಾರ ಮನೆ ಮುಂದೆ ನೋಡಿದರು ಒಂದು ಕಾರಿರುತ್ತದೆ ಹೊರೆತು ಮರ ಗಿಡಗಳಿರುವುದಿಲ್ಲಾ. ಹಣ ಕೂಡಿಡುವ ತರಾತುರಿಯಲ್ಲಿ ನಮಗಿಂದು ಮನೆಯ ಮುಂದೆ ಒಂದು ಗಿಡನೆಡುಲು ಸಮಯವಿಲ್ಲದಾಗಿದೆ. ಹವಾಮಾನ ವೈಪರೀತ್ಯಕ್ಕೆ ಶಪಿಸಿದರೇನು ಭಾಗ್ಯ, ಅದನ್ನು ಹತೋಟಿಯಲ್ಲಿಡುವ ಗುಟ್ಟನ್ನು ಮರೆತಿರುವುದು ನಮ್ಮ ತಪ್ಪಲ್ಲವೇ. ಬಿಸಿಲಿನ ಬೇಗೆ ನಮಗೆ ಈಗಲೆ ಅತಿ ಎನಿಸಿದರೆ ಮುಂದಿನ ಐದು ವರ್ಷದ ನಂತರದ ಪರಿಸ್ಠಿತಿಯನ್ನು ಒಮ್ಮೆ ಯೋಚಿಸಿ ನೋಡಿ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ಎನ್ನುವ ಕಾಲ ಬರಬಾರದಲ್ಲವೇ. ಇಲ್ಲವಾದರೆ,
ಧರೆಯೆ ಹತ್ತಿ ಉರಿಯುವಾಗ ಬದುಕಲೆಲ್ಲಿ ಓಡುವೆ...

No comments: