Monday, June 01, 2009

ತುಂಬಿತು ವರುಷ.. ತಂದಿದೆಯೇ ಹರುಷ?

ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ,
ನಿಮ್ಮ ನೇತೃತ್ವದಲ್ಲಿ ನಮ್ಮ ಭಾರತೀಯ ಜನತಾ ಪಾರ್ಟಿಯ ಸರ್ಕಾರ ಒಂದು ವರ್ಷ ತುಂಬಿದ ಈ ಸಂದರ್ಭದಲ್ಲಿ ನಿಮಗೆ ನನ್ನ ಬೇವು ಬೆಲ್ಲ. ಈ ಒಂದು ವರ್ಷದಲ್ಲಿ ನಿಮ್ಮಿಂದ ಜನರಿಗೆ ಆಗಿರುವ ಅಭಿವೃಧ್ಧಿ ಕಾರ್ಯಗಳ ಘೋಷಣೆಗಳು ಶ್ಲಾಘನಿಯ. ನಮ್ಮ ಸರ್ಕಾರದ ಸದೃಡತೆಗೆಂದು ನೀವು ಕೈಗೊ೦ಡ "ಆಪರೇಷನ್ ಕಮಲ"ವನ್ನು ನಾವು ಒಪ್ಪುತ್ತೇವೆ. ಹಲವಾರು ಚುನಾವಣೆಗಳಿದ್ದ ಈ ವರ್ಷದಲ್ಲಿ ನಿಮ್ಮ ಸಾಧನೆ ತೃಪ್ತಿಕರವಾಗಿದೆ. ಚುನಾವಣೆಯ ನಂತರ ನಿಮ್ಮ ಮೊಗದಲ್ಲಿ ಕಾಣಸಿಗುತ್ತಿರುವ ಮುಗುಳ್ನಗೆ ನಮ್ಮಲ್ಲೂ ಹರ್ಷವನ್ನು, ಹೊಸ ಆಸೆಯನ್ನು ತುಂಬಿದೆ. ಆದರೆ, ಈ ಒಂದು ವರ್ಷದ ನಿಮ್ಮ ಸಾಧನೆ ನಿಜವಾಗಿಯೂ ಜನರಲ್ಲಿ ಸಂತಸ, ಸಮಧಾನವನ್ನು ತಂದಿದೆಯೆ ಎಂದು ಪ್ರಶ್ನಿಸಿಕೊಂಡರೆ ಉತ್ತರ ಬಲು ಸುಲಭ. ಇಲ್ಲಾ. ನಿಮ್ಮ ಸರ್ಕಾರದ ಈ ಒಂದು ವರ್ಷದ ಸಾಧನೆ ಬರೀ ಶೂನ್ಯ. ನಿಮ್ಮ ಒಳ ರಾಜಕೀಯ, ಪುತ್ರ ವಾತ್ಸಲ್ಯ, ನಿಮ್ಮ ಹಾಗೂ ಗಣಿ ಧಣಿಗಳ ದೊಂಬರಾಟ, ನಿಮ್ಮ ಒಳ (ಒಣ) ರಾಜಕೀಯ ಇನ್ನು ಹತ್ತು ಹಲವಾರು ಸಂಗತಿಗಳು ನಿಮ್ಮ ಸರ್ಕಾರದ ಮೇಲೆ ನಮಗಿದ್ದ ಆಸೆಯನ್ನು ಮಣ್ಣು ಪಾಲು ಮಾಡಲು ಮಾತ್ರ ಯಶಸ್ವಿಯಾಗಿದೆ. ಈ ಸರ್ಕಾರವನ್ನು ನಾವು ನಮ್ಮ ಸರ್ಕಾರ ಎಂದು ಹೇಳಲು ನಾಚಿಕಿಯಾಗಿದೆ.


ನಾ ಕಂಡ ಮುಖ್ಯಮಂತ್ರಿಗಳ ಪೈಕಿ ನಿಮ್ಮನ್ನು ನಾನು "ಕೋಟಿ" ಮುಖ್ಯಮಂತ್ರಿಯೆಂದು ಬಣ್ಣಿಸಲು ಇಚ್ಚಿಸುತ್ತೇನೆ. ಏನೇ ಅವಘ್ಹಡವಾದರೂ ನಿಮ್ಮಿಂದ ಜನರಿಗೆ ಸಿಗುತ್ತಿರುವುದು ಒಂದು / ಎರಡು ಕೋಟಿ ಪರಿಹಾರ ಧನದ ಪೊಳ್ಳು ಭರವಸೆಯೊಂದೆ. ಈ ಒಂದು ವರ್ಷದಲ್ಲಿ ನೀವು ಜನರಿಗೆ ಸರಿ ಸುಮಾರು ಎಷ್ಟು ಕೋಟಿ ಪರಿಹಾರ ಧನದ ಭರವಸೆ ನೀಡಿರುವಿರಿ, ಹಾಗೂ ಎಷ್ಟು ಜನರಿಗೆ ನಿಮ್ಮ ಪರಿಹಾರ ಕೈ ಸೇರಿದೆ ಎಂಬ ಅರಿವು ನಿಮಗಿದೆಯೆ. ಪಕ್ಷೇತರ ಶಾಸಕರ ಬೆಂಬಲ ಇದ್ದರೂ ಸರ್ಕಾರದ ಸುಭದ್ರತೆಗೆಂದು ಆಪರೇಷನ್ ಕಮಲ ನಡೆಸಿದಿರೆಂದು ಸಮಧಾನ ನೀಡುತ್ತಿರುವ ನಿಮ್ಮ ಸರ್ಕಾರ, ನಾಳೆ ನಿಮ್ಮ ಪಕ್ಷದ ಶಾಸಕರೇ ಪಕ್ಷಾಂತರ ಮಾಡಿದರೆ ಹೇಗೆ ಸುಭದ್ರ ಸರ್ಕಾರ ನೀಡುವಿರಿ? ಹಾಗೇನಾದರು ಆದರೆ, ಜನರ ಮೇಲೆ ನೀವು ವಿನಾಕಾರದ ಹೇರಿದ ಉಪಚುನಾವಣೆಗಳ ಲಾಭವೇನು? ಇದು ಜನರ ಮತಕ್ಕೆ ನೀವು ಮಾಡಿದ ಧ್ರೋಹವೆಂಬ ಅರಿವು ನಿಮಗ್ಗಿಲ್ಲವೆ. ಒಂದು ದಿನ ಐವತ್ತು ವರ್ಷದಲ್ಲಿ ಆಗಿರದ ಸಾಧನೆ ನಾವು ಮಾಡಿದ್ದೇವೆ ಎಂದು ಹೇಳುವ ನಿಮ್ಮ ಸರ್ಕಾರದ ಪ್ರತಿನಿಧಿಗಳು, ಮರುದಿನ ಒಂದು ವರ್ಷದಲ್ಲಿ ಏನು ಸಾಧಿಸಲು ಸಾಧ್ಯ, ನಮಗೂ ಸ್ವಲ್ಪ ಸಮಯಾವಕಾಶ ಕೊಡಿ ಎಂದು ಬೇಡುವುದು ಹಾಸ್ಯವಾಗಿದೆ. ಉಪಚುನಾವಣೆಯ ಸಮಯದಲ್ಲಿ ಆ ಕ್ಷೇತ್ರಗಳಿಗೆ ವಿಶೇಷ ಅನುಧಾನ ಘ್ಹೋಶಿಸಿದ ನೀವು, ಈಗ ಬಿಬಿಎಂಪಿ ಚುನಾವಣೆ ಬಂದಾಗ ದಿನಕ್ಕೊಂದರಂತೆ ಬೆಂಗಳೂರಿನಲ್ಲಿ ಯೋಜನೆಗಳನ್ನು ಘೋಶಿಸಿರುವುದನ್ನು ನೋಡಿದರೆ ನಿಮ್ಮ ಗುರಿ ಕೇವಲ ಚುನಾವಣೆಗಳನ್ನು ಗೆಲ್ಲುವುದು ಮಾತ್ರ ಎಂಬ ಅರಿವು ಮೂಡುತ್ತದೆ.


ಮುಖ್ಯಮಂತ್ರಿಗಳೇ, ನಿಮ್ಮಿಂದ ನಾವು ಬಹಳಷ್ಟು ನಿರೀಕ್ಷಿಸುತ್ತಿದ್ದೇವೆ. ನಮ್ಮ ಕನಸುಗಳನ್ನು ಮಣ್ಣಿನಲ್ಲಿ ಕಟ್ಟಿದ ಮನೆಯಾಗಿಸಬೇಡಿ. ಹಿಂದಿನ ಸರ್ಕಾರದಂತೆ ನಿಮ್ಮ ಸರ್ಕಾರ ಕೂಡ ಬರೀ ಮಾತಿನಲ್ಲಿ ಸ್ವರ್ಗ ತೋರಿಸದಂತಾಗಲಿ. ನಿಮ್ಮಿಂದ ದಿನಕ್ಕೊಂದು ಹೊಸ ಯೋಜನೆಯನ್ನೋ ಅಥವಾ ದಿನಕ್ಕೊಂದು ಭರವಸೆಯನ್ನೋ ನಾವು ನಿರೀಕ್ಷಿಸುವುದಿಲ್ಲಾ. ಹೊಸ ಭರವಸೆ ನೀಡುವ ಮುನ್ನ ಹಳೇ ಯೋಜನೆಗಳನ್ನು ಪೂರ್ಣಗೊಳಿಸಿ. ವರ್ಷಕ್ಕೋಂದೇ ಯೋಜನೆಯಿದ್ದರೂ ಚಿಂತೆಯಿಲ್ಲಾ, ಅದು ಲಕ್ಷಾಂತರ ಜನರಿಗೆ ಭಾಗ್ಯ ಜ್ಯೋತಿಯಾಗಲಿ. ಬೇರೆ ಹಿರಿಯ ರಾಜಕಾರಣಿಗಳಂತೆ ಪೂಜೆ, ಪುನಸ್ಕಾರ, ಮಾಟ ಮಂತ್ರಗಳನ್ನು ನಂಬಿಕೆಡಬೇಡಿ. ನಿಮ್ಮ ಭಕ್ತಿ ನಿಮ್ಮ ಮನೆಯಲ್ಲೇ ಇರಲಿ. ಮಠ, ಮಂದಿರಗಳ ಬದಲು ಜನರ ಬಾಗಿಲಿಗೆ ಹೋಗಿ. ಅವರ ಮನೆಯಲ್ಲಿ ಉಂಡು ಮಲಗುವ ಬದಲು ಅವರ ಬವಣೆ ನಿವಾರಿಸಿ. ದ್ವೇಷ ರಾಜಕೀಯ ಮಾಡಬೇಡಿ, ಬದಲಾಗಿ ನೀವು ಎಲ್ಲಿ ಸೋತಿರುವಿರೋ ಆ ಕ್ಷೇತ್ರಗಳ ಅಭಿವೃಧ್ಧಿಗೆ ಹೆಚ್ಚಿನ ಆಧ್ಯತೆ ಕೊಡಿ. ನಿಮ್ಮ ಸರ್ಕಾರದ ಯೋಚನೆಗಳ ಜಾಹೀರಾತಿನಲ್ಲಿ ನೀವು ಮಾತ್ರ ನಕ್ಕರೆ ಸಾಲದು, ನಿಮ್ಮ ಯೋಜನೆಯ ಉಪಯೋಗ ಪಡೆಯುತ್ತಿರುವ ಪ್ರತಿಯೊಬ್ಬರು ನಗಬೇಕು. ಹೆಮ್ಮೆಯಿಂದ ಹೇಳಿಕೊಳ್ಳಲು ಒಂದೇ ಒಂದು ಉತ್ತಮ ಕೆಲಸ ಮಾಡಿ, ನಿಮ್ಮ ಸರ್ಕಾರವನ್ನು ಗೆಲ್ಲಿಸಿದ್ದಕ್ಕೆ ನಾವು ಹೆಮ್ಮೆ ಪಡುತ್ತೇವೆ.


ಇಷ್ಟೆಲ್ಲಾ ಬರೆದಿದ್ದರ ಕಾರಣ ಒಂದೇ. ನೀವೀಗ ಎಡವಿದರೆ ಜನರು ರಾಜಕೀಯ ಪಕ್ಷಗಳ ಮೇಲೆ ಇರುವ ಅಲ್ಪ ಸ್ವಲ್ಪ ನಂಬಿಕೆಯನ್ನೂ ಕಳೆದುಕೊಳ್ಳುತ್ತಾರೆ. ಈ ಸರ್ಕಾರ ಕೇವಲ ಬದಲಾವಣೆಗೆಂದು ಬಂದು ಹೋದ ಸರ್ಕಾರವಾಗಬಾರದು. ಭಾರತೀಯ ಜನತಾ ಪಾರ್ಟಿಯ ಸರ್ಕಾರ ಇನ್ನೊಮ್ಮೆ ಅಧಿಕಾರ ನಡೆಸುವುದನ್ನು ನಾವು ಬಯಸುತ್ತೇವೆ.